Wednesday, August 31, 2022

Ganesha In limelight


(Drawing courtesey: Shri Umesh B.V)

ಈ ಚಿತ್ರಕ್ಕೆ ನನ್ನ ಕಲ್ಪನೆ:

ಗಣೇಶ:

|ಅಮ್ಮ! ನಿನ್ನ ಸೇರಲೆಂದು ಬಂದೆ ನನ್ನ ವಾಹನವನ್ನೆರಿ|

|ಹಿಂಸಿಸುತ್ತಿರುವರು ನನ್ನಟಿ.ವಿ. ಚಾನ್ನೆಲ್ಗಳೆಲ್ಲಾ ಸೇರಿ|

|ದಿಕ್ಕೇ ತೋಚದಂತಾಗಿದೆ ನನ್ನ ವಾಹನವ ನಿಂತಿರಲು ಬೆದರಿ|

|ನೀನೇ ನನಗೆ ದಾರಿ ತೋರು ಎನ್ನಮ್ಮ ಗೌರಿ|


ಗೌರಿ:

|ನಿನಗೆ ದಾರಿ ನಾ ತೋರಬೇಕೇ ಓ‌ ನನ್ನ ಮುದ್ದು |

|ಮೌನವಾಗಿ ಬಂದುಬಿಡು ಅಲ್ಲಿಂದ ಎದ್ದು|

|ಭಕ್ತರೆಲ್ಲ ಕಾಯುತ್ತಿರುವರು ಪೂಜೆಗಾಗಿ ನಿನ್ನ|

|ವರಸಿದ್ಧಿ ವಿನಾಯಕನಾಗಿ ಹರಸು ಎಲ್ಲರನ್ನ|


ಎಲ್ಲರಿಗೂ ಆ ವರಸಿದ್ಧಿ ವಿನಾಯಕನು ಶುಭವನ್ನುಂಟು ಮಾಡಲಿ

Tuesday, August 30, 2022

ಲಕ್ಷ್ಮಿಕೇಶವ ಭಜನೆ



(ಸುಂದರಾನನ ಸುಂದರಾನನ ಧಾಟಿಯಲ್ಲಿ)

ಲಕ್ಷ್ಮಿಕೇಶವ ಲಕ್ಷ್ಮಿಕೇಶವ
ಹರಿ ಹರಿ ಹರಿ ಹರಿ ಲಕ್ಷ್ಮಿಕೇಶವ

ಶಂಖ ಚಕ್ರವು ಗದಾಪದ್ಮವೂ
ನಾಲ್ಕು ಕೈಲಿ ಹಿಡಿದಾ ಲಕ್ಷ್ಮಿಕೇಶವ

ಶ್ರೀಲಕ್ಷ್ಮಿಯು ಪದ್ಮದಲ್ಲಿಹ
ಶ್ರೀಲಕ್ಷ್ಮೀಪತಿ ಲಕ್ಷ್ಮಿಕೇಶವ

ಚೆನ್ನಕೇಶವ ಸೌಮ್ಯಕೇಶವ
ಗೋಮುಖದ ಒಡಲಿನ ಶ್ರೀ ಲಕ್ಷ್ಮೀಕೇಶವ

ಕೌಶಿಕಮುನಿಯು ತಪವ ಮಾಡಿದ
ಪುಣ್ಯಕ್ಷೇತ್ರ ಕೌಶಿಕದ ಲಕ್ಷ್ಮಿಕೇಶವ

ಪಂಚಲಿಂಗ ಕ್ಷೇತ್ರದಿ ಮಧ್ಯೆ ನೆಲೆಸಿಹ
ಹರಿಹರ ಸ್ವರೂಪ ಲಕ್ಷ್ಮಿಕೇಶವ

ಚೈತ್ರ ಮಾಸದ ಹುಣ್ಣಿಮೆ ನಿನ್ನ
ಬ್ರಹ್ಮರಥೋತ್ಸವ ಲಕ್ಷ್ಮಿಕೇಶವ

ಹರಿಹಂಸನ ಕುಲದೈವವೇ
ಅನುಗ್ರಹಿಸೊ ನೀ ಎಮ್ಮ ಲಕ್ಷ್ಮಿಕೇಶವ 

Friday, August 26, 2022

ನಮಿಪೆ ಲಂಬೂ ದೊಡ್ಡಪ್ಪ

Shri Lambodara A


ನಮ್ಮ ನೆಚ್ಚಿನ ದೊಡಪ್ಪ ಲಂಬೋದರ,
ಏ.ಪಿ ರಾವ್ ಅಚ್ಚಮ್ಮ ದ್ವಿತೀಯ ಕುವರ
ಲಲಿತೆಗೆ ಅನುರೂಪ ವರ
ವಿವಾಹವಾಯಿತು  ಸರಳ ಸುಂದರ

ನಾಮಧೇಯದಲಿ ಶಂಭು-ಗೌರಿಸುತ
ಮೀನಾಕ್ಷಿ-ಶಂಭು ಗೌರಿಯರಿಗೆ ಪಿತ
ಬಯಸುತ್ತಿದ್ದಿರಿ ಸದಾ ಪರಹಿತ 
ಎಲ್ಲರೂ ಒಂದೇ ಎಂಬುದೇ ನಿಮ್ಮ ಮತ 

ಪದವಿ ಪಡೆದ ವಿಷಯ ಗಣಿತ
ಗಣಕ ತಂತ್ರಾಂಶದಲ್ಲಿ ಬಹಳ ಆಸಕ್ತ 
ತಾಂತ್ರಿಕ ಪದವಿಯಿಲ್ಲದ ಅನಭಿಷಕ್ತ ಅಭಿಯಂತ 
ಕಸದಿಂದ ರಸತೆಗೆವ  ಕಲೆಯು ಕರಗತ 

ನೀವೊಂದು  ಜ್ಞಾನದ ಭಂಡಾರ
ಹರಿಸುತ್ತಿದ್ದಿರಿ ಹಾಸ್ಯದ ಮಹಾಪೂರ
ನಮ್ಮ ಬುದ್ಧಿ ಮತಿಗೆ  ಚೇತೋಪಹಾರ 
ಮುಖದ ಮೇಲಿನ ಮುಗುಳ್ನಗೆಯೇ ಮನೋಹರ 

ಅಡಿಗಡಿಗೂ ನುಡಿನುಡಿಗೂ
ಪದಗಳೊಂದಿಗಾಡುತ್ತಿದ್ದ ನಿಮಗಾರು ಸಮ?
Funಗಳ   ಮಾಡುತ್ತ Punಗಳ ಸುರಿಸುತ್ತಿದ್ದ  
ನೀವು ನಿಜವಾದ Punಡಿತೋತ್ತಮ 

ನಿಮ್ಮ ಕಾರ್ಯ ವೈಖರಿಯ ಗಮ್ಮತ್ತು
ಅದನ್ನು ನೋಡಿದವರಿಗೆೇ ಗೊತ್ತು
ನೀವು ಬಿಲ್ ಪಾವತಿಸುವ ವೇಗಕ್ಕೆ 
ವಿದ್ಯುತ್ತೂ ನಾಚಿನೀರಾಗಿತ್ತು

ಸದಾ ಪುಸ್ತಕರತ  ಜ್ಞಾನದ  ನಿಜ ಪಿಪಾಸು 
ಜ್ಞಾನ ಸೌರಭ ಯಾವಾಗಲೂ ನಿಮ್ಮ ಆಸುಪಾಸು 
ನೀವಾಗಿದ್ದಿರಿ  ಬ್ರಹ್ಮ ಜಿಜ್ಞಾಸು 
ನಡೆದಿತ್ತು ಚಿಂತನ ಮಂಥನ ನೀಗುತ್ತಿದ್ದರೂ ಅಸು

ಅಕ್ಕತಂಗಿಯರ  ಮಕ್ಕಳಿಗೆ ನೆಚ್ಚಿನ ಲಂಬೂ ಮಾಮ
ನಿಮ್ಮ ಆರಾಧ್ಯ ದೈವ ಶ್ರೀ ರಾಮ
ಆ ರಾಮನು ನಿಮಗೆ ಕರುಣಿಸಲಿ ಪರಂಧಾಮ.
ಜನನ ಮರಣದ ಚಕ್ರ ಕಳಚಿ ನೀವಲ್ಲಿ ಇರಿ ಆರಾಮ

(ಜನನ: 1933,   ಮರಣ: 23-08-2022, ಶ್ರಾವಣ ಕೃಷ್ಣ ದ್ವಾದಶಿ, ಶುಭಕೃತ್ ಸಂವತ್ಸರ)

ಕೊಸರು : 
ಹಾಸ್ಯಪ್ರಿಯ  ನಮ್ಮ ದೊಡ್ಡಪ್ಪ ಲಂಬೋದರ
ಆಗಿತ್ತು ಅವರಿಗೆ ತವರಿಗೆ ಹೋಗಲು ಅವಸರ 
ಹಬ್ಬಕ್ಕೆ ಮುಂಚೆಯೇ ಮುಚ್ಚಿದರು ಈ ಲೋಕದ ಖಾತಾ 
ನಮಗೆಲ್ಲಾ ಗೌರಿ ಗಣೇಶ ಹಬ್ಬ ಗೋತಾ

Tuesday, June 28, 2022

ವರ್ಷ ಋತುವಿನ ಆಗಮನ

ರಾಗ : ಮಿಯಾ ಮಲ್ಹಾರ್
ತಾಳ : ತೀನ್ ತಾಳ

ಕರಿಯ ಮೋಡಗಳ ಘರ್ಜನೆ 
ವರ್ಷ ಋತುವಿನ ಸೂಚನೆ
ಗಿರಿಗೆ ಮೋಡಗಳ ಚುಂಬನ
ಮೇಘರಾಜನ ಆಲಿಂಗನ 

ಹಸಿರನು  ಹೊದ್ದಿದೆ ಪ್ರಕೃತಿಯ ತನುವು 
ಮಳೆಯ ಧಾರೆಯ ಗಂಭೀರ ಗಾನವು
ತೋರುತಲಿಹುದು  ಧರೆಯಲಿ  ಸ್ವರ್ಗವು 
ತಳಮಳಿಸುತಲಿದೆ ವಿರಹದಿ ಜೀವವು

ಪಶುಪಕ್ಷಿಗಳ ನೀರವ ಮೌನ 
ಋಷಿಗಳು ಮಾಡಿಹೆ ಮೌನದಿ ಧ್ಯಾನ 
ಮನವು ಬಯಸಿದೆ ಹರಿಹಂಸನ
ಕೃಷ್ಣನ ಕೊಳಲಿನ ಮಧುರ ಗಾನ


Monday, June 20, 2022

ಹೀಗೊಂದು ಪ್ರೇಮ ಕವಿತೆ

ನಿನ್ನ ಪಡೆದು ಧನ್ಯನಾದೆನು, ನಾನು


ನಿನ್ನ ನೋಟ ನನ್ನ ನೊಟ
ಸೇರಿ ಒಂದೇ ದೃಷ್ಟಿಯು
ನಿನ್ನ ಜೀವ ನನ್ನ ಜೀವ
ಸೇರಿ ಹೊಸತು ಸೃಷ್ಟಿಯು

ನಿನ್ನ ‌ಮನಸು ಎನ್ನ ಮನಸು
ಸೇರಿ  ಆಗಲೆಮ್ಮ ಕನಸು 
ಕನಸು ನನಸು ಆದರಾಗ
ನಮ್ಮ ಜೀವನ ಸೊಗಸು

ನಿನ್ನ ಸ್ಪರ್ಶದಿ ಏನೋ ಕಂಪನ
ತನುವಿನೊಳಗೆ ರೋಮಾಂಚನ
ನಿನ್ನ ನುಡಿಯು ಎನ್ನ ಹೃದಯಕೆ
ಪ್ರೇಮತೀರ್ಥದ ಸಿಂಚನ
(ನಮ್ಮ ಜೀವನವು ಹೀಗೆ ಇರಲಿ
ಎಂದು ಬೇಡುವೆ ದೇವನ)

ಧರ್ಮ ಮಾರ್ಗದಿ ನಡೆಯುತ 
ನಾವಾಗುವ ವಿಜೇತರು
ಜನನ ಮರಣ ಚಕ್ರ ದಾಟಿ
ಆಗುವ ಪರಮಹಂಸರು

                                     -- ಹರಿಹಂಸ

Monday, June 13, 2022

ಹೂವಿನ ಅಭಿಲಾಷೆ

ಆಸೆ ಎನಗಿಲ್ಲ ಸುರಬಾಲೆಯರ 
ಆಭರಣದಿ ಪೋಣಿಸಿಕೊಳ್ಳಲು||

ಆಸೆ ಎನಗಿಲ್ಲ ಪ್ರೇಮಹಾರದಲಿದ್ದು 
ಪ್ರೇಮಿಗಳನು ಸೆಳೆಯಲು.||

ಆಸೆ ಎನಗಿಲ್ಲ ಹೇ ಹರಿ!
ಸಾಮ್ರಾಟರ ಶವವನ್ನೇರಲು||

ಆಸೆ ಎನಗಿಲ್ಲ ದೇವ ದೇವಿಯರ 
ಮುಡಿಗೇರುವ ಭಾಗ್ಯಕೆ ಗರ್ವಪಡಲು||

ಕಿತ್ತುಬಿಡು ಗಿಡದಿಂದ ಹೇ ವನಮಾಲಿ !
ಏಸೆದುಬಿಡು ಆ ದಾರಿಯಲಿ  ನನ್ನನ್ನು |
ಎಲ್ಲಿ ನಡೆದು ಹೋಗುವರೋ ಅನೇಕ ವೀರರು 
ತಾಯ್ನಾಡಿಗಾಗಿ ಅರ್ಪಿಸಲು ತಮ್ಮ ಶಿರವನ್ನು||

(ಹಿಂದಿ ಮೂಲ: ಮಖ್ಖನ್ ಲಾಲ್ ಚತುರ್ವೇದಿ

ಅನುವಾದ: ಹರಿಪ್ರಸಾದ್)

https://kaavyaalaya.org/pushp_kee_abhilaashaa

Monday, January 17, 2022

ಕೂರ್ಮನಿಗೊಂದು ಚರಮಗೀತೆ


 

ನಿನ್ನ ಪ್ರೀತಿಪಾತ್ರರನು ಅಗಲಿದೆಯಾ ಓ ಕೂರ್ಮ
ಕಳೆಯಿತೇ ಆವುದೋ ಜನುಮದ ನಿನ್ನ ಕರ್ಮ?
ಜನನ ಮರಣ ಚಕ್ರವೇ ಈ ಜಗತ್ತಿನ ಧರ್ಮ
ನಿನ್ನಲ್ಲಡಗಿದೆ ಸಾಧನೆಯ ಪಥಕೆ ಅನೇಕ ಮರ್ಮ

ನಿನ್ನ ಉಸಿರಾಟದ ಗತಿ ಆಗಿಹುದು ಮಂದಗತಿ
ಮೋಕ್ಷಕೆ ಸಾಧಿಸಬೇಕು ಏರಿಳಿತಗಳಿಲ್ಲದ ಮನಸ್ಥಿತಿ
ಕವಚವು ನಿನಗಿತ್ತಿಹುದು ಆಘಾತಗಳ ತಡೆದುಕೊಳ್ಳುವ ಶಕ್ತಿ
ಸಹನಶೀಲತೆಯು ಸಾಧನೆಯ ಪಥದೊಳೊಂದು ಯುಕ್ತಿ

ಬೇಕಾದಾಗ ನಿನ್ನ ನೀನೆಳೆದುಕೊಳ್ಳುವೆ ಚಿಪ್ಪಿನೊಳಗೆ
ಅರಸಬೇಕು ಆನಂದವ ಅಂತರ್ಮುಖಿಯಾಗಿ ನಮ್ಮೊಳಗೆ
ನಿನ್ನ ನೋಡಿ ನಾವು ಕಲಿಯಬೇಕು ನಿರ್ಲಿಪ್ತತೆ
ಸಂಸಾರ ಸಾಗರದಿ ದಾಟಲು ಕಲಿಯಬೇಕು ಸ್ಥಿತಪ್ರಜ್ಞತೆ

ಅಂದು ನೀನೆತ್ತಿದೆ ಮಂಥನಕೆ ಮಂದರದ ಭಾರ
ನೀನಾದರೋ ವಿಷ್ಣುವಿನ ಅವತಾರ
ಏಲ್ಲೋ ಇದ್ದ ನೀನು ಆದೆ ಅವರಿಗೆ ಹತ್ತಿರ
ಇಂದಾಗಿದೆ ನಿನ್ನ ಅಗಲಿಕೆಯಿಂದ ಆಗಿದೆ ಹೃದಯ ಭಾರ