ನಮ್ಮ ನೆಚ್ಚಿನ ದೊಡಪ್ಪ ಲಂಬೋದರ,
ಏ.ಪಿ ರಾವ್ ಅಚ್ಚಮ್ಮ ದ್ವಿತೀಯ ಕುವರ
ಲಲಿತೆಗೆ ಅನುರೂಪ ವರ
ವಿವಾಹವಾಯಿತು ಸರಳ ಸುಂದರ
ನಾಮಧೇಯದಲಿ ಶಂಭು-ಗೌರಿಸುತ
ಮೀನಾಕ್ಷಿ-ಶಂಭು ಗೌರಿಯರಿಗೆ ಪಿತ
ಬಯಸುತ್ತಿದ್ದಿರಿ ಸದಾ ಪರಹಿತ
ಎಲ್ಲರೂ ಒಂದೇ ಎಂಬುದೇ ನಿಮ್ಮ ಮತ
ಪದವಿ ಪಡೆದ ವಿಷಯ ಗಣಿತ
ಗಣಕ ತಂತ್ರಾಂಶದಲ್ಲಿ ಬಹಳ ಆಸಕ್ತ
ತಾಂತ್ರಿಕ ಪದವಿಯಿಲ್ಲದ ಅನಭಿಷಕ್ತ ಅಭಿಯಂತ
ಕಸದಿಂದ ರಸತೆಗೆವ ಕಲೆಯು ಕರಗತ
ನೀವೊಂದು ಜ್ಞಾನದ ಭಂಡಾರ
ಹರಿಸುತ್ತಿದ್ದಿರಿ ಹಾಸ್ಯದ ಮಹಾಪೂರ
ನಮ್ಮ ಬುದ್ಧಿ ಮತಿಗೆ ಚೇತೋಪಹಾರ
ಮುಖದ ಮೇಲಿನ ಮುಗುಳ್ನಗೆಯೇ ಮನೋಹರ
ಅಡಿಗಡಿಗೂ ನುಡಿನುಡಿಗೂ
ಪದಗಳೊಂದಿಗಾಡುತ್ತಿದ್ದ ನಿಮಗಾರು ಸಮ?
Funಗಳ ಮಾಡುತ್ತ Punಗಳ ಸುರಿಸುತ್ತಿದ್ದ
ನೀವು ನಿಜವಾದ Punಡಿತೋತ್ತಮ
ನಿಮ್ಮ ಕಾರ್ಯ ವೈಖರಿಯ ಗಮ್ಮತ್ತು
ಅದನ್ನು ನೋಡಿದವರಿಗೆೇ ಗೊತ್ತು
ನೀವು ಬಿಲ್ ಪಾವತಿಸುವ ವೇಗಕ್ಕೆ
ವಿದ್ಯುತ್ತೂ ನಾಚಿನೀರಾಗಿತ್ತು
ಸದಾ ಪುಸ್ತಕರತ ಜ್ಞಾನದ ನಿಜ ಪಿಪಾಸು
ಜ್ಞಾನ ಸೌರಭ ಯಾವಾಗಲೂ ನಿಮ್ಮ ಆಸುಪಾಸು
ನೀವಾಗಿದ್ದಿರಿ ಬ್ರಹ್ಮ ಜಿಜ್ಞಾಸು
ನಡೆದಿತ್ತು ಚಿಂತನ ಮಂಥನ ನೀಗುತ್ತಿದ್ದರೂ ಅಸು
ಅಕ್ಕತಂಗಿಯರ ಮಕ್ಕಳಿಗೆ ನೆಚ್ಚಿನ ಲಂಬೂ ಮಾಮ
ನಿಮ್ಮ ಆರಾಧ್ಯ ದೈವ ಶ್ರೀ ರಾಮ
ಆ ರಾಮನು ನಿಮಗೆ ಕರುಣಿಸಲಿ ಪರಂಧಾಮ.
ಜನನ ಮರಣದ ಚಕ್ರ ಕಳಚಿ ನೀವಲ್ಲಿ ಇರಿ ಆರಾಮ
(ಜನನ: 1933, ಮರಣ: 23-08-2022, ಶ್ರಾವಣ ಕೃಷ್ಣ ದ್ವಾದಶಿ, ಶುಭಕೃತ್ ಸಂವತ್ಸರ)
ಕೊಸರು :
ಹಾಸ್ಯಪ್ರಿಯ ನಮ್ಮ ದೊಡ್ಡಪ್ಪ ಲಂಬೋದರ
ಆಗಿತ್ತು ಅವರಿಗೆ ತವರಿಗೆ ಹೋಗಲು ಅವಸರ
ಹಬ್ಬಕ್ಕೆ ಮುಂಚೆಯೇ ಮುಚ್ಚಿದರು ಈ ಲೋಕದ ಖಾತಾ
ನಮಗೆಲ್ಲಾ ಗೌರಿ ಗಣೇಶ ಹಬ್ಬ ಗೋತಾ
No comments:
Post a Comment