||ಶ್ರೀ||
||ಓಂ ನಮಃ ಶಿವಾಯ||
(ಸಂತ ಕನಕದಾಸರ ಈಶನಿನ್ನ ಚರಣಭಜನೆ ಕೃತಿಯ ರೀತಿಯಲ್ಲಿ)
ಸ್ವಾಮಿ ನಿನ್ನ ಸ್ಮರಣೆಯನ್ನು ನೇಮದಿಂದ ಮಾಡುವೇನು
ತಮವ ನೀಗಿ ಬೆಳಕ ನೀಡೊ ಸೋಮನಾಥನೇ
ಕಲ್ಮಶಗಳ ತುಂಬಿಕೊಂಡು ಮಲಿನವಾದ ಎನ್ನ ಮನವ
ಮಲ್ಲೆಯಂತೆ ಸ್ವಚ್ಛ ಮಾಡೊ ಮಲ್ಲಿಕಾರ್ಜುನ
ಮೋಹ ಜಾಲದಲ್ಲಿ ಸಿಲುಕಿ ಭವದ ದಾಹ ತೀರದೇ
ಹಾಹಾಕಾರ ಮಾಡುತಿರುವೆ ಮಹಾಕಾಲನೇ
ಕ್ಷೇಮಕರವು ನಿನ್ನ ನಾಮಕಾಗಲೆನ್ನ ಹೃದಯ ಧಾಮ
ಓಂಕಾರದಿ ನೆಲೆಸಿ ಇರುವ ಅಮಲೇಶ್ವರ
ವಿದ್ಯೆ ಹೀನನಾಗಿ ನಿನ್ನ ಮರೆವು ಒದಗಿತಯ್ಯ ಎನಗೆ
ಹೃದಯಗುಹ್ಯದಲ್ಲಿ ತೋರೊ ವೈದ್ಯನಾಥನೇ
ನಮಕದಿಂದ ಭಜಿಸಿ ನಿನ್ನ ಚಮಕದಿಂದ ಬೇಡುವೇನು
ಕಾಮಾದಿ ಅರಿಯ ದಮಿಸೋ ಭೀಮಶಂಕರ
ಕಾಮದಹನ ಮಾಡಿದಂತೆ ಕಾಮಕ್ರೋಧಗಳನು ದಹಿಸಿ
ಆತ್ಮತತ್ವದೆಡೆಗೆ ನಡೆಸೊ ರಾಮೇಶ್ವರ
ರಾಗಭೋಗದಿಂದ ಬಿಡಿಸಿ ವಿರಾಗಿಯಾಗಿ ಮಾಡಿ ಭವ-
ರೋಗವನ್ನು ದೂರಮಾಡೋ ನಾಗೇಶನೇ
ವಿಷಯಸುಖಕೆ ವಶವಾದ ಮನದ ವಿಷವನೆಲ್ಲ ಹೀರೋ
ವಿಷಕಂಠನಾದ ಶ್ರೀ ವಿಶ್ವೇಶ್ವರ
ಜಂಭ ಢಂಬ ತುಂಬಿರುವ ಹುಂಬನ ಈ ಡಿಂಭವನ್ನು
ಸಂಭ್ರಮದಿ ತೊಲಗಿಸಯ್ಯ ತ್ರ್ಯಂಬಕೇಶನೇ
ಉದಾಸೀನ ಮಾಡದೇ ಉದಾರದಿಂದ ಕೃಪೆಯ ಸುರಿಸು
ಆದಿದೇವನಾದ ಕೇದಾರನಾಥನೇ
ದಕ್ಷಿಣಾಮೂರ್ತಿ ನೀನು ತೆರೆದು ನಿನ್ನ ಅಕ್ಷಿಗಳನು
ಮೋಕ್ಷ ಜ್ಞಾನ ಹರಿಸೊ ಶ್ರೀ ಘೃಷ್ಣೇಶ್ವರ
ಜ್ಯೋತಿರ್ಲಿಂಗ ಸ್ಮರಣೆಯನ್ನು ನಿತ್ಯದಲ್ಲಿ ಮಾಡುವವಗೆ
ಸಪ್ತಜನುಮದಾ ಪಾಪ ಪೂರ್ಣ ನಾಶವು
ಹರಿಹಂಸನಿಷ್ಟ ದೈವ ಹರನ ಪೂಜೆಗೈದವರಿಗೆ
ತೋರಿ ಕೃಪೆಯನ್ನು ಹರಿ ಮುಕ್ತಿ ಕೊಡುವನು
-- ಹರಿಹಂಸ
ಮಾಘ ಶುದ್ಧ ತೃತೀಯ
ಶ್ರೀ ಶುಭಕೃತ್ ಸಂವತ್ಸರ
24-1-2023
ಮಾಘ ಶುದ್ಧ ತೃತೀಯ
ಶ್ರೀ ಶುಭಕೃತ್ ಸಂವತ್ಸರ
24-1-2023
No comments:
Post a Comment