Tuesday, December 26, 2023

ಗೋಮಾತೆಗೆ ಆರತಿ

ಆರತಿ ಬೆಳಗುವೆ ಜಯ ಗೋಮಾತೆ ಜಯ ಜಯ ಗೋಮಾತೆ|
ಧರೆಯೊಳು ಮನುಜಗೆ ಅಮೃತವ ನೀಡುವ ಮಾತೇ ನೀ ವರದಾತೆ||
ಜಯ ಜಯ ಗೋಮಾತೆ - 1

ಶರಧಿಯ ಮಥಿಸುವ ಸಮಯದಲಿ ಉದಿಸಿ ಬಂದೆ ನೀನು|
ನರರು ಬೇಡಿದ ವರವನು ನೀಡುವ ಸುರಲೋಕದ ಧೇನು
ಜಯ ಜಯ ಗೋಮಾತೆ|| - 2

ದಿಲೀಪ ರಾಜನ ಶಾಪವ ಕಳೆದ ಆ ನಂದಿನಿ ನೀನು|
ಕಲಿಯುಗದಲ್ಲಿ ನಿನ್ನ ಪೂಜಿಪರ ಪಾಪ ಕಳೆವ ಧೇನು||
ಜಯ ಜಯ ಗೋಮಾತೆ - 3

ವಿಶ್ವಾಮಿತ್ರನು ಪ್ರಯತ್ನ ಮಾಡಲು ಸೆಳೆದೊಯ್ಯಲು ನಿನ್ನ|
ವಿಶ್ವಸೇನೆಯನೆ ಸೃಷ್ಟಿಸಿ ಅವನ ಸೋಲಿಸಿದ ಕಾಮಧೇನು||
ಜಯ ಜಯ ಗೋಮಾತೆ - 4

ಪಂಚಗವ್ಯದ ಪ್ರಾಶನದಿಂದಲಿ  ತನುವಿನ ಶುದ್ಧಿಯು|
ಪಂಚಾಮೃತದ ಅಭಿಷೇಕದಿ ಪಾಪನಾಶನವು||
ಜಯ ಜಯ ಗೋಮಾತೆ - 5

ದೇಹವು ನಿನ್ನ ಆಗಿಹುದು ಸರ್ವದೇವತೆಗಳ ತಾಣವು|
ಇಹ- ಪರಲೋಕದಿ ಶ್ರೆಯಕ್ಕೆ ನಿನ್ನ ಪೂಜೆ ಕಾರಣವು||
ಜಯ ಜಯ ಗೋಮಾತೆ -6
                - *ಹರಿಹಂಸ*

ಕನಕಾಭಿಷೇಕ

ಹಿರಿಯ ದಂಪತಿ ಕನಕ ಕೇಶವರಿಗೆ

ಹಿರಿದು ಸಂಭ್ರಮದ ದಿನವದೊಂದು

ಮರಿಮಗನ ಜನನವಾಯಿತು 

ಹರಿಯ ವರಕೃಪೆಯಿಂದಲಿ


ಸುವೀರ ಮೃದುಲ ದಂಪತಿಗಳಿಗೆ

ಸುವಿಚಾರವೊಂದು ಮನದಿ ಮೂಡಿತು

ಸುವರ್ಣಾಭಿಷೆಕವ ಮಾಡಲು ಅಜ್ಜಅಜ್ಜಿಗೆ

ತವಕದಿ ನಿಶ್ಚಯಿಸಿದರು ದಿನವನು


ಮೊದಲದಿನದಿ ಉದಯಕಾಲಕೆ 

ನಾಂದಿಯಿಂದಲಿ ಮೊದಲುಗೊಂಡು

ಉದಕಶಾಂತಿಯು ಸಂಜೆವೇಳೆಗೆ

ಮೋದಕದಿ ಗಣಹೋಮವು ಮರುದಿನ


ಸ್ವಜನರೆಲ್ಲರೂ ಸಂಭ್ರಮದಿ ಸೇರಿರೆ

ಸುಜನರೆಲ್ಲರೂ ಮಂತ್ರ ಪಠನವ ಮಾಡಿರೆ

ಸುಜಲವ ಸುರಿದನು ಮರಿಮಗನು ಮೊದಲು

ರಜತ ಸಾರಣಿಗೆಯಿಂದಲಿ ಹಿರಿಯರಿಗೆ


ಜನರು ಕೂಡಾ ಜಲವ ಸುರಿದರು

ಮನದಿ ತುಂಬಿ  ಸಾರ್ಥಕತೆಯಿಂದಲಿ

ಕನಕ ಕೇಶವರಿಗೆ ಹೀಗೆ ನಡೆಯಿತು

ಕನಕಾಭಿಷೇಕವು ಸಂಭ್ರಮದಿಂದಲಿ

Saturday, August 5, 2023

ನೀಲಕಂಠ

 

(Painting by:Mayura Simha https://www.instagram.com/mayurasimha/)

ಸುರಾಸುರರೆಲ್ಲ ಸೇರಿ ಅಮೃತ ಮಂಥನವ ಮಾಡಿರೆ
ನೊರೆಯಾಗಿ ಸರ್ಪದ ಬಾಯಿಂದ ಹರಿಯಿತು ವಿಷವು
ಪರಿತಪಿಸುತಿರೇ ಮೂರ್ಲೋಕ ಆ ನಂಜಿನಾ ಬೇಗೆಗೆ
ಹರನು ತ್ವರಿತದಿಬಂದು ನುಂಗಿದನು ಹಾಲಹಲವ

ಅಂಜಿದಳು ಉಮೆಯು ಇದನು ಕಂಡು
ನಂಜು ಗಂಡನಿಗೇ ಕೇಡ ಮಾಡುವುದೆಂದು
ಮಂಜುನಾಥನ ಗಂಟಲಲೇ ತಡೆಯಲು ವಿಷವನು
ನಂಜುಕಂಠನಾಗಿ ಕಂಡನು ಆ ಹರನು

ಭಿತ್ತಿಯೊಳು ಕಂಡ ಓ ನೀಲಕಂಠನೇ !
ಚಿತ್ತದೊಳಿರುವ ನಂಜ ಕುಡಿದು ಮನ
ಎತ್ತಲೋ ಪೋಗದಂತೆ ಮಾಡಿ ಎನ್ನ
ಸುತ್ತಿರುವ ಮಾಯೆಕಳಚಯ್ಯನೆಂದ ಹರಿಹಂಸ

Monday, April 10, 2023

ಕಾಶಿ ಚಿತ್ರ

 

(Painting by:Mayura Simha https://www.instagram.com/mayurasimha/)

ನೋಡಿದೆನು ಇಂದು .. ನಾ

ತಪೋಕ್ಷೇತ್ರ ಶ್ರೀ ಕಾಶಿಪುರಕೆ ಬಂದು
ಸೋಪಾನಗಳ ಮೇಲೆ ಕುಳಿತಿಹರ ಇಂದು
ಜಪತಪವ ಗೈದಿಹ ಭಕ್ತ ಜನರು ನಿಂದು
ಪಾಪ ನಾಶಿನಿ  ಗಂಗಾ ತಟದಲಿ ಮಿಂದು

ಹರನು ನಿಂತಿಹ ಆಗಸದಿ ಧರೆಗೆ ಇಳಿಸುತ 
ಸುರನದಿ ಗಂಗೆಯ ತೀರದಿ ಇರುವ ಪುರವು
ವರವಾರಾಣಸಿ ಕ್ಷೇತ್ರದಿ ಮರಣಿಪ ಜನರಿಗೆ
ವರರಾಮನಾಮವ ಕಿವಿಯೊಳು ಉಲಿಯುತ

ಮೂಡಣನದಿ ರವಿಯುದಿಸುವ ಸಮಯದಿ
ಪಿಡಿದು ಡಮರು ಶೂಲಗಳ ಕರದಿ
ಕಂಡನು ಹರಿಹಂಸ ವಿಧುವ ಶಿಖೆಯೊಳು ಶಿವನ 
ಮೂಡಿಹ  ಶಿಖಿ ಕುಂಚದಿ ಚಿತ್ರದಲಿ

(ಶಿಖಿ = ಮಯೂರ)

Friday, February 17, 2023

ಜ್ಯೋತಿರ್ಲಿಂಗ ಸ್ಮರಣೆ

                             ||ಶ್ರೀ||

     ||ಓಂ ನಮಃ ಶಿವಾಯ||

(ಸಂತ ಕನಕದಾಸರ ಈಶನಿನ್ನ ಚರಣಭಜನೆ ಕೃತಿಯ ರೀತಿಯಲ್ಲಿ)
 
ಸ್ವಾಮಿ ನಿನ್ನ ಸ್ಮರಣೆಯನ್ನು ನೇಮದಿಂದ ಮಾಡುವೇನು
ತಮವ ನೀಗಿ ಬೆಳಕ ನೀಡೊ
ಸೋಮನಾಥನೇ

ಕಲ್ಮಶಗಳ ತುಂಬಿಕೊಂಡು ಮಲಿನವಾದ ಎನ್ನ ಮನವ
ಮಲ್ಲೆಯಂತೆ ಸ್ವಚ್ಛ ಮಾಡೊ
ಮಲ್ಲಿಕಾರ್ಜುನ

ಮೋಹ ಜಾಲದಲ್ಲಿ ಸಿಲುಕಿ ಭವದ ದಾಹ ತೀರದೇ
ಹಾಹಾಕಾರ ಮಾಡುತಿರುವೆ
ಮಹಾಕಾಲನೇ

ಕ್ಷೇಮಕರವು ನಿನ್ನ ನಾಮಕಾಗಲೆನ್ನ ಹೃದಯ ಧಾಮ 
ಓಂಕಾರದಿ ನೆಲೆಸಿ ಇರುವ
ಅಮಲೇಶ್ವರ

ವಿದ್ಯೆ ಹೀನನಾಗಿ ನಿನ್ನ ಮರೆವು ಒದಗಿತಯ್ಯ ಎನಗೆ 
ಹೃದಯಗುಹ್ಯದಲ್ಲಿ ತೋರೊ
ವೈದ್ಯನಾಥನೇ

ನಮಕದಿಂದ ಭಜಿಸಿ ನಿನ್ನ ಚಮಕದಿಂದ ಬೇಡುವೇನು
ಕಾಮಾದಿ ಅರಿಯ ದಮಿಸೋ
ಭೀಮಶಂಕರ

ಕಾಮದಹನ ಮಾಡಿದಂತೆ ಕಾಮಕ್ರೋಧಗಳನು ದಹಿಸಿ
ಆತ್ಮತತ್ವದೆಡೆಗೆ ನಡೆಸೊ
ರಾಮೇಶ್ವರ

ರಾಗಭೋಗದಿಂದ ಬಿಡಿಸಿ ವಿರಾಗಿಯಾಗಿ ಮಾಡಿ ಭವ-
ರೋಗವನ್ನು ದೂರಮಾಡೋ
ನಾಗೇಶನೇ

ವಿಷಯಸುಖಕೆ ವಶವಾದ ಮನದ ವಿಷವನೆಲ್ಲ ಹೀರೋ
ವಿಷಕಂಠನಾದ  ಶ್ರೀ
ವಿಶ್ವೇಶ್ವರ

ಜಂಭ ಢಂಬ ತುಂಬಿರುವ ಹುಂಬನ ಈ ಡಿಂಭವನ್ನು
ಸಂಭ್ರಮದಿ ತೊಲಗಿಸಯ್ಯ
ತ್ರ್ಯಂಬಕೇಶನೇ
 
ಉದಾಸೀನ ಮಾಡದೇ  ಉದಾರದಿಂದ ಕೃಪೆಯ ಸುರಿಸು
ಆದಿದೇವನಾದ ಕೇದಾರನಾಥನೇ

ದಕ್ಷಿಣಾಮೂರ್ತಿ ನೀನು ತೆರೆದು ನಿನ್ನ ಅಕ್ಷಿಗಳನು 
ಮೋಕ್ಷ ಜ್ಞಾನ ಹರಿಸೊ ಶ್ರೀ
ಘೃಷ್ಣೇಶ್ವರ

ಜ್ಯೋತಿರ್ಲಿಂಗ ಸ್ಮರಣೆಯನ್ನು ನಿತ್ಯದಲ್ಲಿ ಮಾಡುವವಗೆ
ಸಪ್ತಜನುಮದಾ ಪಾಪ ಪೂರ್ಣ ನಾಶವು

ಹರಿಹಂಸನಿಷ್ಟ ದೈವ ಹರನ ಪೂಜೆಗೈದವರಿಗೆ
ತೋರಿ ಕೃಪೆಯನ್ನು ಹರಿ ಮುಕ್ತಿ ಕೊಡುವನು
-- ಹರಿಹಂಸ
   ಮಾಘ ಶುದ್ಧ ತೃತೀಯ
   ಶ್ರೀ ಶುಭಕೃತ್ ಸಂವತ್ಸರ
    24-1-2023