Tuesday, June 28, 2022

ವರ್ಷ ಋತುವಿನ ಆಗಮನ

ರಾಗ : ಮಿಯಾ ಮಲ್ಹಾರ್
ತಾಳ : ತೀನ್ ತಾಳ

ಕರಿಯ ಮೋಡಗಳ ಘರ್ಜನೆ 
ವರ್ಷ ಋತುವಿನ ಸೂಚನೆ
ಗಿರಿಗೆ ಮೋಡಗಳ ಚುಂಬನ
ಮೇಘರಾಜನ ಆಲಿಂಗನ 

ಹಸಿರನು  ಹೊದ್ದಿದೆ ಪ್ರಕೃತಿಯ ತನುವು 
ಮಳೆಯ ಧಾರೆಯ ಗಂಭೀರ ಗಾನವು
ತೋರುತಲಿಹುದು  ಧರೆಯಲಿ  ಸ್ವರ್ಗವು 
ತಳಮಳಿಸುತಲಿದೆ ವಿರಹದಿ ಜೀವವು

ಪಶುಪಕ್ಷಿಗಳ ನೀರವ ಮೌನ 
ಋಷಿಗಳು ಮಾಡಿಹೆ ಮೌನದಿ ಧ್ಯಾನ 
ಮನವು ಬಯಸಿದೆ ಹರಿಹಂಸನ
ಕೃಷ್ಣನ ಕೊಳಲಿನ ಮಧುರ ಗಾನ


Monday, June 20, 2022

ಹೀಗೊಂದು ಪ್ರೇಮ ಕವಿತೆ

ನಿನ್ನ ಪಡೆದು ಧನ್ಯನಾದೆನು, ನಾನು


ನಿನ್ನ ನೋಟ ನನ್ನ ನೊಟ
ಸೇರಿ ಒಂದೇ ದೃಷ್ಟಿಯು
ನಿನ್ನ ಜೀವ ನನ್ನ ಜೀವ
ಸೇರಿ ಹೊಸತು ಸೃಷ್ಟಿಯು

ನಿನ್ನ ‌ಮನಸು ಎನ್ನ ಮನಸು
ಸೇರಿ  ಆಗಲೆಮ್ಮ ಕನಸು 
ಕನಸು ನನಸು ಆದರಾಗ
ನಮ್ಮ ಜೀವನ ಸೊಗಸು

ನಿನ್ನ ಸ್ಪರ್ಶದಿ ಏನೋ ಕಂಪನ
ತನುವಿನೊಳಗೆ ರೋಮಾಂಚನ
ನಿನ್ನ ನುಡಿಯು ಎನ್ನ ಹೃದಯಕೆ
ಪ್ರೇಮತೀರ್ಥದ ಸಿಂಚನ
(ನಮ್ಮ ಜೀವನವು ಹೀಗೆ ಇರಲಿ
ಎಂದು ಬೇಡುವೆ ದೇವನ)

ಧರ್ಮ ಮಾರ್ಗದಿ ನಡೆಯುತ 
ನಾವಾಗುವ ವಿಜೇತರು
ಜನನ ಮರಣ ಚಕ್ರ ದಾಟಿ
ಆಗುವ ಪರಮಹಂಸರು

                                     -- ಹರಿಹಂಸ

Monday, June 13, 2022

ಹೂವಿನ ಅಭಿಲಾಷೆ

ಆಸೆ ಎನಗಿಲ್ಲ ಸುರಬಾಲೆಯರ 
ಆಭರಣದಿ ಪೋಣಿಸಿಕೊಳ್ಳಲು||

ಆಸೆ ಎನಗಿಲ್ಲ ಪ್ರೇಮಹಾರದಲಿದ್ದು 
ಪ್ರೇಮಿಗಳನು ಸೆಳೆಯಲು.||

ಆಸೆ ಎನಗಿಲ್ಲ ಹೇ ಹರಿ!
ಸಾಮ್ರಾಟರ ಶವವನ್ನೇರಲು||

ಆಸೆ ಎನಗಿಲ್ಲ ದೇವ ದೇವಿಯರ 
ಮುಡಿಗೇರುವ ಭಾಗ್ಯಕೆ ಗರ್ವಪಡಲು||

ಕಿತ್ತುಬಿಡು ಗಿಡದಿಂದ ಹೇ ವನಮಾಲಿ !
ಏಸೆದುಬಿಡು ಆ ದಾರಿಯಲಿ  ನನ್ನನ್ನು |
ಎಲ್ಲಿ ನಡೆದು ಹೋಗುವರೋ ಅನೇಕ ವೀರರು 
ತಾಯ್ನಾಡಿಗಾಗಿ ಅರ್ಪಿಸಲು ತಮ್ಮ ಶಿರವನ್ನು||

(ಹಿಂದಿ ಮೂಲ: ಮಖ್ಖನ್ ಲಾಲ್ ಚತುರ್ವೇದಿ

ಅನುವಾದ: ಹರಿಪ್ರಸಾದ್)

https://kaavyaalaya.org/pushp_kee_abhilaashaa