Saturday, January 9, 1999

ಹಂಸಿನಿ ಈಜಿದಳು

’ರೀ.. ಹಂಸಿನಿ ಇಂದು ಈಜಿದಳು’ ಎಂದು ಫೊನಿನಲಿ
ನಗುನಗುತ ಉಲಿದ ನನ್ನಾಕೆಯ ಧ್ವನಿಯ ಕೇಳಿ
ನನ್ನ ಮೊಗವು ಹಿಗ್ಗಿತು ಸಂತಸದಿ ಅರಳಿ
ಮನಸಿನಾಳದಲಿ ಬಿಚ್ಚಿತು ಹಿಂದಿನ ಹಲವು ತಿಂಗಳ
ಹಂಸಿನಿಯ ಆಟದ ನೆನಪುಗಳಾ ಸುರಳಿ

ಮೂರು ತಿಂಗಳ ಹಿಂದೆ ಹಂಸಿನಿಯು ಮಗುಚಿಕೊಂಡಾಗ
ಹೀಗೆಯೇ ಫೋನಿನಲಿ ಉಲಿದಿದ್ದಳು ನನ್ನಾಕೆಯಾಗ
’ರೀ.. ಹಂಸಿನಿ ಈದಿನ ಮಗುಚಿಕೊಂಡಳು’ ಎಂದು
’ಮಗುಚಿದಳು, ಉರುಳಿದಳು ಮಗುಚಿದಳು, ಉರುಳಿದಳು
ಉರುಳಿ ಉರುಳಿ ಸುಸ್ತಾಗಿ ಅತ್ತಳು ಮಂಚದಡಿಗೆ ಬಂದು’

ಅವಳೆಂದು ಈಜುವಳೋ ಎಂಬ ಕಾತರದಿ ನಾವಿರಲು
ಹಂಸಿನಿಯ ಮಗುಚಿಕೊಳ್ಳುವಾ ಆಟ ಮುಂದೆ ಸಾಗಿರಲು
ಮಗುಚಿಕೊಳ್ಳುವಳು ಪುಟ್ಟ ಕೈಕಾಲ ಬಡಿಯುವಳು ತಲೆಯೆತ್ತಿ ನೋಡುವಳು
ಆಟಿಕೆಗೆ ಕೈಚಾಚುವಳು ಕುಡಿದ ಹಾಲ ಕಕ್ಕುವಳು ಅಲ್ಲಲ್ಲೆ ತಿರುಗುವಳು
ಆಟಿಕೆ ಕೈಗೆಟುಕದೆ ಈಜಲಾರದ ಸಂಕಟದಿ ಕಣ್ಣಲ್ಲಿ ನೀರ ಹರಿಸುವಳು

ಹಸುರಿಗೆ ಹೆಸರಾಗಿರುವ ನಾನಿರುವ ಬಹುದೂರದಾ ದೇಶವಿದು
ಇಂದು ಇದು ಋತುಮಾನದಾ ಚಕ್ರಕ್ಕೆ ಸಿಲುಕಿ ಬರುಡಾಗಿಹುದು
ಹಂಸಿನಿಯು ಈಜಿದಾ ಸುದ್ಧಿಯು ವಸಂತನೋಪಾದಿಯಲಿ ಬಂದು
ಹಂಸಿನಿಯ ನೆನಪುಗಳಾ ಹಸಿರನ್ನು ಚಿಗುರಿಸಿಹುದು
ಋತುಮಾನವನೂ ಮೀರಿ ಮನಕೆ ಹಸಿರ ತುಂಬಿಹುದು


(ಬಾಸೆಲ್ ,ಸ್ವಿಟ್ಶೆರ್ಲ್ಯಾಂಡ್ -   ಜನವರಿ 9, 1999)

No comments:

Post a Comment