ಯಾರ ಜಟೆಗಳಿಂದ ಗಂಗೆ ಧರೆಗೆ ಹರಿದು ಬರುವಳೋ
ಯಾರ ಕಂಠದಲ್ಲಿ ವಿಷ ಭುಜಂಗ ಹಾರ ಭೂಷಣ
ಯಾರ ಡಮರು ನುಡಿದಿದೆ ಡಮಡ್ ಡಮಡ್ ಶಿವ ಶಿವ
ಹರ ಹರ ಶಿವ ಶಿವ ಅದುವೇ ಶಿವನ ತಾಂಡವ ||1||
ಜಲದ ಲಹರಿ ಹರಿಯಲು ಜುಳು ಜುಳು ಹಣೆಯಲಿ
ಅಲೆಯ ಬಲೆಯು ಸುರುಳಿಯಾಗಿ ಸುತ್ತಿರಲು ಜಟೆಯಲಿ
ಫಾಲನೇತ್ರದಲ್ಲಿ ಅಗ್ನಿ ಧಗ ಧಗ ಉರಿದಿದೆ
ಬಾಲಚಂದ್ರ ಶಿರದಲಿ ಪುಳಕವೆನಗೆ ಕ್ಷಣ ಕ್ಷಣ ||2||
ಧರಣಿ ಗಿರಿಯ ಸುತೆಯು ನಂದಿನಿ ಅರ್ಧಾಂಗಿನಿ
ತರಗುಟ್ಟಿದೆ ದಿಗಂತವು ಮನದಿ ಮೋದದಲೆಗಳು
ಯಾರ ಕೃಪೆಯ ಓರೆನೋಟ ತರಿವುದು ಕಷ್ಟಗಳ
ಹರ ಹರ ಎನಲು ಮನದಿ ತುಂಬಿದ ದಿಗಂಬರ ||3||
ನಾಗಮಣಿಯು ಜಟೆಯಿಂದ ಕೆಂಪುಕಾತಿ ಚೆಲ್ಲಿದೆ
ಗಗನವು ಕುಂಕುಮವಿಟ್ಟ ವಧುವಿನ ಮೊಗದಂತಿದೆ
ಅಂಗವಸ್ತ್ರ ಹಾರುತ ಮದಗಜದ ತೊಗಲಿನಂತೆ
ದಿಗ್ಭ್ರಮೆಯಲಿ ಎನ್ನ ಮನವು ಮುದದಿ ಮೋದಗೊಂಡಿತು ||4||
ಸುರರ ಶಿರದಿಂದ ಬಿದ್ದ ಹೂಪರಾಗ ಧೂಳಿನಿಂದ
ಯಾರ ಪಾದ ಪೀಠವು ಸಿಂಗರಿಸಿಗೊಂಡಿದೆಯೋ
ಯಾರ ಜಟೆಯಲಿ ನಾಗರಾಜ ರಾಜಿಸಿರುವನೋ
ಯಾರ ಶಿರಕೆ ಭೂಷಣ ಚಕೊರ ಬಂಧು ಚಂದಿರ ||5||
ಯಾರ ಹಣೆಯ ನೇತ್ರದಿ ಚಿಮ್ಮಿದ ಬೆಂಕಿಯು
ಹೊರಟು ಕಾಮದೇವನನ್ನು ಸುಟ್ಟು ಭಸ್ಮ ಮಾಡಿತೋ
ಯಾರ ಶಿರದಲಿರುವನೋ ಶೀತಲಾರ್ಧಚಂದ್ರನು
ಹರಸಿ ಹರಿಸಲೆಮಗೆ ಸಿರಿಯ ಆ ಮಹಾಕಪಾಲಿಯು ||6||
ವಿಶಾಲ ಹಣೆಯು ಉರಿದಿದೆ ಧಗ ಧಗ ಧಗ ಧಗ
ಭಸ್ಮವಾಗಿ ಹೋದನು ಹೂ ಬಾಣವನು ಬಿಟ್ಟವನು
ವಿಸ್ಮಯಕರ ಚಿತ್ರಗಳನು ಉಮೆಯೆದೆಯಲಿ ಬಿಡಿಸುವ
ಅಸಮಾನ್ಯ ನೃತ್ಯವದುವೆ ತ್ರಿಲೋಚನನ ತಾಂಡವ ||7||
ಕಾರಿರುಳಿನ ಕತ್ತಲೆಯ ಬಾನಿನ ಕರಿಮೋಡದಂತೆ
ತೊರುತಿಹುದು ವಿಷದಿಂದ ಕೊರಳದುವೆ ಹರನ
ಧಾರೆ ಗಂಗೆಯ ಶಿರದಿ ಪೊತ್ತಿಹ ಚರ್ಮಾಂಬರನು
ಶಿರದಿ ಚಂದ್ರನಿಟ್ಟವ ಪೊರೆವ ಭೂಮಿ ಭಾರವ ||8||
ನೀಲ ಕಮಲವರಳಿದಂತೆ ತೋರುತಿಹ ಕಂಠವದುವೆ
ಹಾಲಹಾಲವ ಕಂಠದಲ್ಲೇ ತಡೆದ ನೀಲಕಂಠನು
ಹಲವು ಅಸುರರಾ ಸಂಹರಿಸಿದ ಆ ತ್ರಿಪುರಹರನು
ಕಾಲನಿಗೆ ಕಾಲನಾದ ಅವನನ್ನು ಭಜಿಸುವೆ || 9||
ಯಾರ ಕೊರಳಿನಲ್ಲಿ ಇರುವ ಕದಂಬ ಪುಷ್ಪಹಾರದಿಂದ
ಹೀರಲು ಮಧುರಸವನ್ನು ಭ್ರಮರಗಳು ಭ್ರಮಿಸುತ್ತಿವೆ
ಯಾರು ಕಾಮ ತ್ರಿಪುರಾಸುರ ಭವದ ಅಂತಕನೋ
ಯಾರು ಗಜಾಂಧಕಾಸುರರ ಕೊಂದವನನು ಭಜಿಸುವೆ ||10||
ಯಾರ ಜಟೆಯ ಸರ್ಪದ ಭುಸುಗುಟ್ಟುವ ಉಸಿರಿನಿಂದ
ಯಾರ ಹಣೆಯ ಅಗ್ನಿಯು ಪ್ರಜ್ವಲಿಸುತ್ತಿದೆಯೋ
ಮೃದಂಗ ನಾದ ನುಡಿದಿದೆ ಧಿಮಿಧ್ಧಿಮಿಧ್ಧಿಮಿಧ್ಧಿಮಿ
ತರಂಗ ತಾಳ ಲಹರಿಗೆ ಶಿವನು ಪ್ರಚಂಡ ತಾಂಡವ ||11||
ಒಂದೇ ಅವಗೆ ಮುತ್ತು ರತ್ನ ಕಲ್ಲು ಮುಳ್ಳು ಹೊನ್ನು ಮಣ್ಣು
ಒಂದೇ ಅವಗೆ ಸರ್ಪ ಹಾಗೂ ಹೂವಿನಾ ಹಾರವದುವೆ
ಒಂದೇ ಅವಗೆ ಮಿತ್ರ ಶತ್ರು ಚಕ್ರವರ್ತಿ ಭಿಕ್ಷುಕ
ಎಂದು ಭಜಿಪೆ ಸದಾಶಿವನ ಒಂದೇ ದೃಷ್ಟಿ ಭಾವದಲಿ? ||12||
ಎಂದು ಇರುವೆ ಆನಂದದಿ ಗಂಗೆ ಬದಿಯ ಗುಹೆಯಲಿ ?
ಎಂದು ಬಿಟ್ಟು ಕುಮತಿಯನು ಕರವನೆತ್ತಿ ಮುಗಿವೆನು?
ಎಂದು ಕುದೃಷ್ಟಿಯನು ಬಿಟ್ಟು ಹಣೆಗೆ ತಿಲಕವನಿಟ್ಟು ?
ಎಂದು ಚಿತ್ತಶುದ್ದಿ ಪಡೆವೆ ಶಿವ ಮಂತ್ರವನು ಜಪಿಸುತಾ? ||13||
ಯಾರು ನಿತ್ಯವೂ ಈ ಅತಿಉತ್ತಮ ಸೋತ್ರವ
ಸ್ಮರಿಸಿ ಪಠಿಸಿ ಪಡೆವರೋ ಚಿತ್ತಶುದ್ಧಿ ಸಂತತ
ಬೇರೆ ಗತಿಯು ಇಲ್ಲ ಬಿಟ್ಟು ಶಿವ ಗುರುವಿನ ಭಕ್ತಿಯ
ಹರನ ಸ್ಮರಣೆ ಮಾತ್ರದಿಂದ ಮೋಹ ಪಾಶ ನಾಶವು ||14||