Sunday, December 29, 2024

ದಶಾವತಾರ ಲಾಲಿ ಹಾಡು

ಲಾಲಿ ಶ್ರೀಹರಿಗೆ ಲಾಲಿ ಮಾಧವಗೆ ಲಾಲಿ ಪಾಲ್ಗಡಲ ಶಯನಗೆ|
ಲಾಲಿ ಹತ್ತವತಾರವನು ಮಾಡಿದವಗೆ ಲಾಲಿ ವೈಕುಂಠ ವಾಸನಿಗೆ || ಲಾಲೀ...ಲಾಲೀ..

ಲಾಲಿ ಮೀನಾವತಾರವನು ತಳೆದವಗೆ ಲಾಲಿ ವೇದಗಳ ರಕ್ಷಕಗೆ |
ಲಾಲಿ ಬೆಟ್ಟವನು ಬೆನ್ನಲ್ಲಿ ಪೊತ್ತವಗೆ ಲಾಲಿ ಕೂರ್ಮಾವತಾರಿಗೆ|| ಲಾಲೀ...ಲಾಲೀ..

ಲಾಲಿ ವಸುಧೆಯನು ಕೋರೆಯಿಂ ಪೊರೆದವಗೆ ಲಾಲಿ ಸೂಕರರೂಪಿಗೆ |
ಲಾಲಿ ಕಶಿಪು ಸಂಹಾರಿಗೆ  ಪ್ರಹ್ಲಾದ ವರದಗೆ ಲಾಲಿ ಶ್ರೀ ಲಕ್ಷ್ಮೀನರಸಿಂಹಗೆ|| ಲಾಲೀ...ಲಾಲೀ..

ಲಾಲಿ ಬಲಿಯನ್ನು ತುಳಿದು ಜಗವನ್ನೇ ಅಳೆದವಗೆ ಲಾಲಿ  ವಾಮನರೂಪಿಗೆ |
ಲಾಲಿ ಜಗತಿರುಗಿ ಖಳನೃಪರ ತರಿದವೆಗೆ ಲಾಲಿ ಶ್ರೀ ಪರಶುರಾಮನಿಗೆ || ಲಾಲೀ...ಲಾಲೀ..

ಪಾಲಿಸಿ ಪಿತೃವಾಕ್ಯವನು ಧರುಮದಿ ನಡೆದವಗೆ ಲಾಲಿ ರಾಜೀವಲೋಚನಗೆ |
ಲಾಲಿ ಗೋಪಿ ಚಿತ್ತಾಪಹಾರಿಗೆ ಲಾಲಿ  ನವನೀತ ಚೋರನಿಗೆ || ಲಾಲೀ...ಲಾಲೀ..

ಕಲಿಯುಗದಿ ಅಸುರರ ಬಲಹೀನ ಗೊಳಿಸಿದವಗೆ ಲಾಲಿ ಅವತಾರ ಬುದ್ಧನಿಗೆ |
ಕಲಿಯುಗದ ಅಂತ್ಯದಿ ಧರುಮವನು ಉದ್ಧರಿಸೆ ಬರುವ ಕಲ್ಕಿ ಅವತಾರಿಗೆ || ಲಾಲೀ...ಲಾಲೀ..

ಲಾಲಿ ಶಂಖ ಚಕ್ರವ ಪಿಡಿದು ನಿಂತವಗೆ  ಲಾಲಿ ಶ್ರೀ ಕೌಶಿಕೇಶ್ವರಗೆ || 
ಲಾಲಿ ಹರಿಹಂಸನ ಕುಲದೈವಗೆ ಲಾಲಿ ಶ್ರೀ ಲಕ್ಷ್ಮೀಕೇಶವಗೆ||  ಲಾಲೀ...ಲಾಲೀ

No comments:

Post a Comment