Sunday, July 21, 2024

ಗುರುವೆಂದರೆ..

 
(ಶ್ರೀ ನಿಸ್ಸಾರ್ ಅಹ್ಮದ್ ಅವರ ಕನ್ನಡವೆಂದರೆ ಎಂಬ ಕವಿತೆಯ ದಾಟಿಯಲ್ಲಿ)

ಗುರುವೆಂದರೆ ಬರಿ ಪದವಲ್ಲ ಹಿರಿದಿದೆ ಅದರ ಮಹಿಮೆ
ಬರಿಮಾತಿನಲಿ ಬಣ್ಣಿಸಲಸದಳ ಅಷ್ಟಿದೆ ಗುರುವಿನ ಗರಿಮೆ

ಗುರುವೆಂದರೆ ಬರಿ ಕಡಲಲ್ಲ ಗುರು ಕರುಣೆಯ ಸಾಗರನು
ಗುರುಕರುಣೆಗೆ ಪಾತ್ರನಾದವನು ಭವ ಸಾಗರ ದಾಟುವನು

ಗುರುವೆಂದರೆ ಬರಿ ನಿಧಿಯಲ್ಲ ಜ್ಞಾನದ ಭಂಡಾರ
ಗುರುಜ್ಞಾನವ ಹರಿಸಲು ಶಿಷ್ಯಗೆ ಅರಿವಿನ ಸಾಕ್ಷಾತ್ಕಾರ

ಗುರುವೆಂದರೆ ಬರಿ ಬೆಳಕಲ್ಲ ತಮ ಕಳೆಯುವ ಜ್ಯೋತಿ
ಶರಣಾದವರಿಗೆ ಮುಕ್ತಿ ಪಥವನು ತೋರುವ ವಿಮಲ ಪರಂಜ್ಯೋತಿ

ಗುರುವೆಂದರೆ ಬರಿ ಯುಕ್ತಿಯಲ್ಲ ಭವ ಬಂಧ ಕಳಚುವ ಶಕ್ತಿ
ಗುರುಕೃಪೆಯಿಂದಲಿ ಮೋಕ್ಷವ ಗಳಿಸಲು ಬೇಕು ಗುರುವಿನಲಿ ಸದ್ಭಕ್ತಿ