Sunday, March 10, 2024

ಶಿವತಾಂಡವ ಸ್ತೋತ್ರ ಕನ್ನಡ ಭಾವಾನುವಾದ

         

ಯಾರ ಜಟೆಗಳಿಂದ ಗಂಗೆ ಧರೆಗೆ ಹರಿದು ಬರುವಳೋ
ಯಾರ ಕಂಠದಲ್ಲಿ ವಿಷ ಭುಜಂಗ ಹಾರ ಭೂಷಣ
ಯಾರ ಡಮರು ನುಡಿದಿದೆ ಡಮಡ್ ಡಮಡ್ ಶಿವ ಶಿವ
ಹರ ಹರ ಶಿವ ಶಿವ ಅದುವೇ ಶಿವನ ತಾಂಡವ ||1||

ಜಲದ ಲಹರಿ ಹರಿಯಲು ಜುಳು ಜುಳು ಹಣೆಯಲಿ
ಅಲೆಯ ಬಲೆಯು ಸುರುಳಿಯಾಗಿ ಸುತ್ತಿರಲು ಜಟೆಯಲಿ
ಫಾಲನೇತ್ರದಲ್ಲಿ ಅಗ್ನಿ ಧಗ ಧಗ ಉರಿದಿದೆ
ಬಾಲಚಂದ್ರ ಶಿರದಲಿ ಪುಳಕವೆನಗೆ ಕ್ಷಣ ಕ್ಷಣ ||2||

ಧರಣಿ ಗಿರಿಯ ಸುತೆಯು ನಂದಿನಿ ಅರ್ಧಾಂಗಿನಿ
ತರಗುಟ್ಟಿದೆ ದಿಗಂತವು ಮನದಿ ಮೋದದಲೆಗಳು 
ಯಾರ ಕೃಪೆಯ ಓರೆನೋಟ ತರಿವುದು ಕಷ್ಟಗಳ
ಹರ ಹರ ಎನಲು ಮನದಿ ತುಂಬಿದ ದಿಗಂಬರ ||3||

ನಾಗಮಣಿಯು ಜಟೆಯಿಂದ  ಕೆಂಪುಕಾತಿ ಚೆಲ್ಲಿದೆ
ಗಗನವು ಕುಂಕುಮವಿಟ್ಟ ವಧುವಿನ ಮೊಗದಂತಿದೆ
ಅಂಗವಸ್ತ್ರ ಹಾರುತ ಮದಗಜದ ತೊಗಲಿನಂತೆ  
ದಿಗ್ಭ್ರಮೆಯಲಿ ಎನ್ನ ಮನವು ಮುದದಿ ಮೋದಗೊಂಡಿತು ||4||

ಸುರರ ಶಿರದಿಂದ ಬಿದ್ದ ಹೂಪರಾಗ ಧೂಳಿನಿಂದ
ಯಾರ ಪಾದ ಪೀಠವು ಸಿಂಗರಿಸಿಗೊಂಡಿದೆಯೋ
ಯಾರ ಜಟೆಯಲಿ ನಾಗರಾಜ ರಾಜಿಸಿರುವನೋ
ಯಾರ ಶಿರಕೆ ಭೂಷಣ ಚಕೊರ ಬಂಧು ಚಂದಿರ ||5||

ಯಾರ ಹಣೆಯ ನೇತ್ರದಿ ಚಿಮ್ಮಿದ ಬೆಂಕಿಯು
ಹೊರಟು ಕಾಮದೇವನನ್ನು ಸುಟ್ಟು ಭಸ್ಮ ಮಾಡಿತೋ
ಯಾರ ಶಿರದಲಿರುವನೋ ಶೀತಲಾರ್ಧಚಂದ್ರನು
ಹರಸಿ ಹರಿಸಲೆಮಗೆ ಸಿರಿಯ ಆ ಮಹಾಕಪಾಲಿಯು ||6||

ವಿಶಾಲ ಹಣೆಯು ಉರಿದಿದೆ ಧಗ ಧಗ ಧಗ ಧಗ
ಭಸ್ಮವಾಗಿ ಹೋದನು ಹೂ ಬಾಣವನು ಬಿಟ್ಟವನು
ವಿಸ್ಮಯಕರ ಚಿತ್ರಗಳನು ಉಮೆಯೆದೆಯಲಿ ಬಿಡಿಸುವ 
ಅಸಮಾನ್ಯ ನೃತ್ಯವದುವೆ ತ್ರಿಲೋಚನನ ತಾಂಡವ ||7||

ಕಾರಿರುಳಿನ ಕತ್ತಲೆಯ ಬಾನಿನ ಕರಿಮೋಡದಂತೆ 
ತೊರುತಿಹುದು   ವಿಷದಿಂದ ಕೊರಳದುವೆ ಹರನ
ಧಾರೆ ಗಂಗೆಯ ಶಿರದಿ ಪೊತ್ತಿಹ ಚರ್ಮಾಂಬರನು
ಶಿರದಿ ಚಂದ್ರನಿಟ್ಟವ ಪೊರೆವ ಭೂಮಿ ಭಾರವ ||8||

ನೀಲ ಕಮಲವರಳಿದಂತೆ ತೋರುತಿಹ ಕಂಠವದುವೆ
ಹಾಲಹಾಲವ ಕಂಠದಲ್ಲೇ ತಡೆದ ನೀಲಕಂಠನು
ಹಲವು ಅಸುರರಾ ಸಂಹರಿಸಿದ ಆ ತ್ರಿಪುರಹರನು
ಕಾಲನಿಗೆ ಕಾಲನಾದ ಅವನನ್ನು ಭಜಿಸುವೆ || 9||

ಯಾರ ಕೊರಳಿನಲ್ಲಿ ಇರುವ ಕದಂಬ ಪುಷ್ಪಹಾರದಿಂದ
ಹೀರಲು ಮಧುರಸವನ್ನು ಭ್ರಮರಗಳು ಭ್ರಮಿಸುತ್ತಿವೆ
ಯಾರು ಕಾಮ ತ್ರಿಪುರಾಸುರ ಭವದ ಅಂತಕನೋ
ಯಾರು ಗಜಾಂಧಕಾಸುರರ ಕೊಂದವನನು ಭಜಿಸುವೆ  ||10||

ಯಾರ ಜಟೆಯ ಸರ್ಪದ ಭುಸುಗುಟ್ಟುವ ಉಸಿರಿನಿಂದ
ಯಾರ ಹಣೆಯ ಅಗ್ನಿಯು ಪ್ರಜ್ವಲಿಸುತ್ತಿದೆಯೋ
ಮೃದಂಗ ನಾದ ನುಡಿದಿದೆ ಧಿಮಿಧ್ಧಿಮಿಧ್ಧಿಮಿಧ್ಧಿಮಿ
ತರಂಗ ತಾಳ ಲಹರಿಗೆ ಶಿವನು ಪ್ರಚಂಡ  ತಾಂಡವ ||11||

ಒಂದೇ ಅವಗೆ ಮುತ್ತು ರತ್ನ ಕಲ್ಲು ಮುಳ್ಳು ಹೊನ್ನು ಮಣ್ಣು
ಒಂದೇ ಅವಗೆ ಸರ್ಪ ಹಾಗೂ ಹೂವಿನಾ ಹಾರವದುವೆ
ಒಂದೇ ಅವಗೆ ಮಿತ್ರ ಶತ್ರು ಚಕ್ರವರ್ತಿ ಭಿಕ್ಷುಕ
ಎಂದು ಭಜಿಪೆ ಸದಾಶಿವನ ಒಂದೇ ದೃಷ್ಟಿ ಭಾವದಲಿ? ||12||

ಎಂದು ಇರುವೆ ಆನಂದದಿ ಗಂಗೆ ಬದಿಯ ಗುಹೆಯಲಿ ?
ಎಂದು ಬಿಟ್ಟು ಕುಮತಿಯನು ಕರವನೆತ್ತಿ ಮುಗಿವೆನು?
ಎಂದು ಕುದೃಷ್ಟಿಯನು ಬಿಟ್ಟು ಹಣೆಗೆ ತಿಲಕವನಿಟ್ಟು ?
ಎಂದು ಚಿತ್ತಶುದ್ದಿ ಪಡೆವೆ ಶಿವ ಮಂತ್ರವನು ಜಪಿಸುತಾ? ||13||

ಯಾರು ನಿತ್ಯವೂ ಈ ಅತಿಉತ್ತಮ ಸೋತ್ರವ
ಸ್ಮರಿಸಿ  ಪಠಿಸಿ ಪಡೆವರೋ  ಚಿತ್ತಶುದ್ಧಿ ಸಂತತ
ಬೇರೆ ಗತಿಯು ಇಲ್ಲ ಬಿಟ್ಟು ಶಿವ ಗುರುವಿನ ಭಕ್ತಿಯ 
ಹರನ ಸ್ಮರಣೆ ಮಾತ್ರದಿಂದ ಮೋಹ  ಪಾಶ ನಾಶವು  ||14||