Tuesday, May 24, 2016

ನಾಸ್ತಿಕ - ಆಸ್ತಿಕ - ವೇದಾಂತಿ - ಜ್ಞಾನಿ

ಜಗವೊ೦ದೇ ಇರುವದೆಂದು ವಾದಿಸುವವರು ನಾಸ್ತಿಕರು
ಬ್ರಹ್ಮ ಜಗಗಳರಡೂ ಬೇರೆಯೇ ಎಂದು ನಂಬುವವರು ಬಹುತೇಕ ಆಸ್ತಿಕರು   
ಬ್ರಹ್ಮ ಜಗಗಳರಡೂ ಒಂದೇ ಎನುತಿಹರು ವೇದಾಂತಿಗಳು
ಜಗದೊಳೆಲ್ಲಾ ಬ್ರಹವನ್ನೇ ಕಾಣುವ ಜ್ಞಾನಿಗಳು  ಅತಿವಿರಳರು


ವೇದಾಂತಿಗಳು = ಸಾಧನೆಯ ಪಥದೊಳಿರುವವರು

Tuesday, March 22, 2016

ಹಾರೈಕೆ


(ಮಯೂರನ ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಅರ್ಪಿಸಿದ ಕವಿತೆ )

ಹುಟ್ಟುಹಬ್ಬದ ಹಾರೈಕೆ


ತುಂಬಿದವು ಇಂದಿಗೆ ನವ ವರ್ಷಗಳು ನಿನಗೆ,
ಸಂತಸದ ದಿನವು ಇದು ನಮ್ಮೆಲ್ಲರಿಗೆ

’ನವ’ದ ಮಹತ್ವವ ಬಲ್ಲೆಯೇನು ನೀನು?
ಅದ ಪೇಳಹೊರಟಿಹೆನು ಇಂದು ನಾನು

ನವವೆಂದರೆ ಒಂಬತ್ತು ವಿಧ ಭಕ್ತಿಗಳು
ಭಗವಂತನೊಲುಮೆಗೆ ಭಕ್ತಿ ಮಾರ್ಗವೇ ಮಿಗಿಲು

ರಾತ್ರಿಗಳು ನವ ದಸರಾ ಹಬ್ಬಕೆ
ಶ್ರೇಷ್ಠ ದಿನಗಳವು ಮಹತಾಯಿಯ ಪೂಜೆಗೆ

ನವವೆಂದರೆ ಅರ್ಥ ಹೊಸದೆಂದು
ನಿನಗಿದಾಗಲಿ ನವಜೀವನದ ಪ್ರಾರಂಭ ಇಂದು

ನವಮ ಗುರುವು ಶ್ರೇಷ್ಠ ಜಾತಕದಲಿ
ಗುರುವಿನ ಕೃಪೆ ಬೇಕು ಮುಕ್ತಿ ಮಾರ್ಗದಲಿ

ಇದೋ ಕೇಳು ನಮ್ಮ ಹಾರೈಕೆ..

ಭಕ್ತಿಯೇ ನಿನಗೆ ಮಾರ್ಗವಾಗಲಿ
ಗುರುವಿನ ಅನುಗ್ರಹವಾಗಲಿ ಆ ಮಾರ್ಗದಲಿ
ಆ ಮಹಾತಾಯಿಯ ದರುಶನವಾಗಲಿ

(ಹಂಸಿನಿಯ 9ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬರೆದದ್ದು)

ಜೀವಜಡ ಚೈತನ್ಯ




ಓ! ಜೀವಜಡ ಚೈತನ್ಯ
ನೀನೊಲಿದರೇ ಜೀವಿಗಳ ಜನ್ಯ
ನೀನೊಲಿದರೇ ನಾವ್ ಉಣಲು ಧಾನ್ಯ
ನೀನಿಲ್ಲದಿರೆ ಎಲ್ಲವೂ ಶೂನ್ಯ

ತೊಲಗಿಸು ಎನ್ನಲ್ಲಿನ ಔದಾಸೀನ್ಯ
ಹರಿಯಲಿ ಎನ್ನಲ್ಲಿ ನಿನ್ನ ಚೈತನ್ಯ
ಆಗಲಿ ನಿನ್ನಾರಾಧನೆಯೇ ಪ್ರಾಧಾನ್ಯ
ತನುಮನದಲಿ ತುಂಬಲಿ ದೈನ್ಯ

ನಿನ್ನ ನಾಮದಾ ಮಹಿಮೆ ಅಸಮಾನ್ಯ
ನಿನ್ನ ನಾಮಸ್ಮರಣೆ ಎನಗೆ ಬಲು ಮಾನ್ಯ
ಆಗದಿರು ನೀನೆನಗೆ ಅನ್ಯ
ನೀ ಎನಗೊಲಿದರೆ ನಾ ಧನ್ಯ...

ಸಹಸ್ರಚಂದ್ರದರ್ಶನದ ಆಶಯ

ಎಂಭತ್ತೊಂದು ವಸಂತಗಳ ಪೂರೈಸಿದ ಸಂಭ್ರಮವು ನಿಮಗಿಂದು
ಸಾಸಿರಚಂದಿರನ ಪ್ರಭೆಯಿಂದ ಕೂಡಿದೆ ನಿಮ್ಮ ವದನವಿಂದು

ಅನೇಕ ಜನ್ಮದಾ ಪುಣ್ಯರಾಶಿಯ ಫಲ ನಿಮಗೆ ಈ ಜನ್ಮ
ಆರು ಬಲ್ಲರು ನಿಮ್ಮ ಜನ್ಮರಹಸ್ಯದ ಮರ್ಮ?

ತಾಂತ್ರಿಕ ಪದವಿ ಪಡೆದು ಮಾಡಿದಿರಿ ಸಮಾಜಸೇವೆ
ತಂತ್ರಶಾಸ್ತ್ರದ ವಿಧಿಯು ಮಾಡಿಸಿತು ಮಾತೃಪೂಜೆ

ಹಂಬಲವಾಯಿತು ನಿಮಗೆ ಕಳಚಲು ಜನನ ಮರಣದ ಚಕ್ರ
ಗುರು ಕೃಪೆಯಿಂದೊದಗಿ ಬಂತು ನಿಮಗೆ ಶ್ರೀಚಕ್ರ

ನಿಮಗಾಯ್ತು ಅನೇಕ ಗುರುಗಳ ಸಂತರ ಒಡನಾಟ
ಗುರುಕೃಪೆಗೊಳಗಾದ ನಿಮ್ಮ ಜೀವನವೇ ಒಂದು ಪಾಠ

ಎಂಭತ್ತನಾಲ್ಕು ಜೀವಕೋಟಿಗಳ ದಾಟಿ ಈ ಜನ್ಮವೆತ್ತಿದಿರಿ
ಆ ತಾಯಿಯ  ಉಪಾಸನೆಗೆಂದು ಜೀವನವ ಮುಡಿಪಾಗಿರಿಸಿದಿರಿ

ಎಲ್ಲ ಸ್ತ್ರೀಯರನು ನೋಡಿದಿರಿ ತಾಯಿಯಾಗಿ
ಆ ತಾಯಿಯೇ ಸಹಾಯಕೆ ಬಂದೊದಗಿದಳು ಪತ್ನಿಯಾಗಿ

ತಾಯಿ ರಾಜರಾಜೇಶ್ವರಿಯು ಸಂಪೂರ್ಣ ಕೃಪೆಗೈದಿಹಳು
ಸಹಸ್ರಚಂದ್ರದರ್ಶನದ ಭಾಗ್ಯವನು ನಿಮಗೆ ಕರುಣಿಸಿಹಳು

ಸೂರ್ಯಕೋಟಿ ಸಮಪ್ರಭನ ಹೆಸರದುವೆ ನಿಮಗೆ
ಚಂದ್ರಸಹಸ್ರ ಸಮಪ್ರಭನ ಆಶೀರ್ವಾದವೆಮಗೆ

ಈ ಸಂಧರ್ಭದಲಿ ನಮ್ಮೆಲ್ಲರಾ ಅಂತರಂಗದ ಹಾರೈಕೆಯು
ನೀವು ಇನ್ನೂ ಹಲವಾರು ವಸಂತಗಳ ದಾಟಲೆಂದು
ತಾಯಿ ರಾಜರಾಜೇಶ್ವರಿಯಲ್ಲಿ  ನಮ್ಮ ಪ್ರಾರ್ಥನೆಯು
ಈ ಜನ್ಮವ ಕಡೆಯಾಗಿಸಿ ಮೋಕ್ಷದೆಡೆಗೆ ಕರೆದೊಯ್ಯಲೆಂದು


ಮನ್ಮಥನಾಮ ಸಂವತ್ಸರ ಮಾಘ ಶುಕ್ಲ ತ್ರಯೋದಶಿ ಸೋಮವಾರ - 21-03-2016
ಸೂಚನೆ: ತಂದೆಯವರ ೮೧ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಅರ್ಪಿಸಿದ್ದು.